ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಬಹುರೂಪ: ತುಳು ಯಕ್ಷಗಾನಗಳು

ಲೇಖಕರು :
ಪುರುಷೋತ್ತಮ ಬಿಳಿಮಲೆ
ಶನಿವಾರ, ಜುಲೈ 6 , 2013

ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಯಕ್ಷಗಾನದಲ್ಲಿ ಮುಖ್ಯವಾದ ಎರಡು ಪ್ರಾದೇಶಿಕ ಪ್ರಭೇದಗಳಿವೆ. ಅವುಗಳೆಂದರೆ ಕರಾವಳಿಯ ದಕ್ಷಣ ಭಾಗದಲ್ಲಿ ಪ್ರಚಲಿತದಲ್ಲಿರುವ ತೆಂಕುತಿಟ್ಟು ಮತ್ತು ಉತ್ತರ ಭಾಗದಲ್ಲಿ ಕಂಡು ಬರುವ ಬಡಗುತಿಟ್ಟು. ಎರಡೂ ಭಾಗದ ಯಕ್ಷಗಾನಗಳಿಗೆ ಆಧಾರವಾಗಿರುವ ಪ್ರಸಂಗ ಪುಸ್ತಕಗಳು ಬಹುತೇಕ ಸಾಮಾನ್ಯವೇ ಆಗಿದ್ದರೂ ಅದನ್ನು ರಂಗದಲ್ಲಿ ಪ್ರಸ್ತುತ ಪಡಿಸುವರೀತಿಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಬಣ್ಣ, ಕುಣಿತ, ಮಾತುಗಾರಿಕೆ ಮತ್ತು ನೃತ್ಯದಲ್ಲಿ ನಾವು ಬದಲಾವಣೆಗಳನ್ನು ಗಮನಿಸಬಹುದು. 1980 ರದಶಕದಲ್ಲಿ ಆಗ ಬಹಳ ಜನಪ್ರಿಯವಾಗಿದ್ದ ತೆಂಕುತಿಟ್ಟು ಯಕ್ಷಗಾನದಲ್ಲಿ ಇನ್ನೊಂದು ಭಾಷಿಕ ಪ್ರಬೇಧ ಕಾಣಿಸಿಕೊಂಡಿದ್ದು ವಿದ್ವಾಂಸರು ಅದನ್ನು ತುಳು ತಿಟ್ಟು ಎಂದು ಕರೆದರು. ಏಕೆಂದರೆ ಈ ಬದಲಾಣೆಯು ಅದುವರೆಗೆ ಕನ್ನಡದಲ್ಲಿ ಪ್ರದರ್ಶಿತವಾಗುತ್ತದ್ದ ಯಕ್ಷಗಾನವನ್ನು ತುಳುವಿನೆಡೆಗೆ ಕರೆದೊಯ್ದಿತು.

ಆರಂಭದ ಕೆಲವು ವರ್ಷಗಳಿಲ್ಲಿ ತುಳು ಯಕ್ಷಗಾನಗಳು ಎಷ್ಟು ಜನಪ್ರಿಯವಾದುವೆಂದರೆ ಪ್ರೇಕ್ಷಕರು ಸಾವಿರಾರು ರೂಪಾಯಿಗಳನ್ನು ಕೊಟ್ಟು ಕಾಳಸಂತೆಯಲ್ಲಿ ಟಕೇಟ್ ಖರೀದಿಸಿ ಆಟ ನೋಡಿದರು. ಟೆಂಟ್ ಮೇಳಗಳ ದಿನದ ಸಂಪಾದನೆ 50 ಸಾವಿರ ರೂಗಳಿಗೂ ಮೀರಿತು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ತುಳು ಪ್ರಸಂಗದ ಪ್ರೇಕ್ಷಕರ ಸಂಖ್ಯೆ 30 ಸಾವಿರವನ್ನು ಮೀರಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೆ.

ಇಂದು ತುಳು ಯಕ್ಷಗಾನಗಳ ಭರಾಟೆ ಕಡಿಮೆಯಾಗಿದೆ. ಈಚೆಗೆ ಮಂಗಳೂರಿಗೆ ಹೋಗಿದ್ದಾಗ ಶನಿವಾರದಂದು ನೆಹರೂ ಮೈದಾನದ ಕಡೆ ಹೋಗಿದ್ದೆ. ಅಲ್ಲಿ ಒಂದು ಮೇಳವೂ ಟೆಂಟ್ ಹಾಕಿರಲಿಲ್ಲ. ಚೆಂಡೆ ಸದ್ದಿಗಾಗಿ ನನ್ನ ಕಿವಿಗಳು ಹಂಬಲಿಸಿ ನಿರಾಶೆಗೊಂಡವು. ಯಕ್ಷಗಾನದ ಸುವರ್ಣಯುಗ ಮುಗಿದು ಹೋಯಿತೇ ಎಂಬ ಚಿಂತೆಯಲ್ಲಿ ಸದ್ದಿಲ್ಲದೆ ಮೌನವಾಗಿ ಹಿಂದಿರುಗಿದೆ.

ಯಕ್ಷಗಾನದ ಚೌಕಿ(ಗ್ರೀನ್-ರೂ೦)ಯ ಒ೦ದು ದೃಶ್ಯ
ಯಾಕೆ ತುಳು ಪ್ರಸಂಗಗಳು ಒಮ್ಮೆಲೇ ಅತ್ಯಂತ ಜನಪ್ರಿಯವಾಗಿ, ಅನತಿಕಾಲದಲ್ಲಿಯೇ ಕೊನೆ ಗೊಂಡಿತು? ಈ ಬಗೆಗೆ ಒಳ್ಳೆಯ ವಿಶ್ಲೇಷಣೆಯೊಂದು ನಡೆಯಬೇಕಾದ ಅಗತ್ಯವಿದೆ. ನನ್ನ ಸೀಮಿತ ತಿಳುವಳಿಕೆ ಪ್ರಕಾರ, ತುಳು ಪ್ರಸಂಗಗಳ ಉಗಮಕ್ಕೆ ಕನ್ನಡ ಯಕ್ಷಗಾನ ಪ್ರಸಂಗಗಳೇ ಮುಖ್ಯ ಕಾರಣವಾಗಿದೆ. ಹೇಗೆಂದರೆ, ಭಕ್ತಿಯುಗದ ಮೌಲ್ಯಗಳು ಮತ್ತು ಹರಿದಾಸರ ಯಕ್ಷಗಾನ ಪ್ರವೇಶಗಳು ಯಕ್ಷಗಾನದ ಘನತೆಯನ್ನು ಎತ್ತರಿಸಿದ ಜೊತೆಗೆ ರಂಗದಿಂದ ಬ್ರಾಹ್ಮಣೇತರರನ್ನು ದೂರ ಮಾಡಿತು. ರಂಗದಲ್ಲಿ ಬಣ್ಣದ ವೇಷ ಮಾಡುತ್ತಿರುವ ಅತ್ಯಂತ ಹಿರಿಯ, ಪ್ರಬುದ್ಧ ಬ್ರಾಹ್ಮಣೇತರ ವೇಷಧಾರಿಗಳನ್ನು ಚೌಕಿಯಲ್ಲಿ ( ವೇಷಹಾಕುವ ಜಾಗ) ಏಕವಚನದಲ್ಲಿಯೇ ಸಂಭೋದಿಸಲಾಗುತ್ತಿತ್ತು. ಇದಕ್ಕೆ ವಿರುದ್ಧವಾಗಿ ಕಿರಿಯ ವಯಸ್ಸಿನ ಬ್ರಾಹ್ಮಣ ಕಲಾವಿದರನ್ನು ಬಹುವಚನದಲ್ಲಿಯೇ ಮಾತಾಡಿಸಲಾಗುತ್ತಿತ್ತು.

ಹೀಗೆ ಮೂಲೆಗೆ ಸರಿಸಲ್ಪಟ್ಟ ಬ್ರಾಹ್ಮಣೇತರ ಕಲಾವಿದರು ತುಳು ಯಕ್ಷಗಾನಗಳ ಮೂಲಕ ಮತ್ತೆ ರಂಗಭೂಮಿಯಲ್ಲಿ ಮುಂಚೂಣಿಗೆ ಬಂದರು. ಇಂಥದ್ದೊಂದು ಪರಿವರ್ತನೆ ಸಂಭವಿಸುತ್ತಲಿರುವಾಗ ಅದಕ್ಕೆ ಪರವಾದ ಮತ್ತು ವಿರೋಧವಾದ ಪ್ರತಿಕ್ರಿಯೆಗಳೂ ಹುಟ್ಟಿಕೊಂಡವು.ಅದುವರೆಗೆ ಪರಂಪರೆಯನ್ನು ಮನ್ನಿಸದೆ, ಸ್ವಂತ ಪ್ರತಿಭೆಯಿಂದ ಅದನ್ನು ಬದಲಾಯಿಸಿದ ಮಂದಿಗಳೂ ಕೂಡಾ ಆಗ ಪರಂಪರೆಯ ರಕ್ಷಣೆಯ ಬಗೆಗೆ ಮಾತಾಡತೊಡಗಿದರು. ಯಕ್ಷಗಾನದಲ್ಲಿ ತುಳುವನ್ನು ತರುವುದರ ಬಗೆಗೆ ನಡೆದ ಚರ್ಚೆಗಳು ವಾಸ್ತವವಾಗಿ ಸಾಮಾಜಿಕ ಸ್ಥಿತ್ಯಂತರವೊಂದನ್ನೇ ಸಂಕೇತಿಸುತ್ತವೆ.

ಏಕೆಂದರೆ ತುಳು ಭಾಷೆಯ ಬಗೆಗೆ ನಡೆದ ಚರ್ಚೆಗಳು ಭಾಷೆಗೆ ಮಾತ್ರ ಸೀಮಿತವಾಗಿರಲು ಸಾಧ್ಯವಿಲ್ಲ. ಅದು ಹಿಂದುಳಿದ ವರ್ಗದ ಜನರ ಬದುಕಿನಲ್ಲಾದ ಮಾರ್ಪಾಡುಗಳೊಂದಿಗೆ ಕೂಡಾ ಸಂಬಂಧ ಹೊಂದಿದೆ. ಭೂಮಸೂದೆಯ ಪರಿಣಾಮಕಾರೀ ಜ್ಯಾರಿ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಿಕ್ಕಿದ ಅವಕಾಶ ತುಳುಭಾಷೆಯಾಗುಳ್ಳ ಬಿಲ್ಲವ, ಬಂಟ ಮೊಗವೀರ, ಗೌಡ ಮೊದಲಾದ ಸಮುದಾಯಗಳು ಸಾಸಿಕೊಂಡ ಸ್ವಾಭಿಮಾನ, ಹಿಂದುಳಿದ ವರ್ಗದ ಜನರು ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶ ಮಾಡಿದ ರೀತಿಯೇ ಮೊದಲಾದ ಅನೇಕ ಸಂಗತಿಗಳು ತುಳುವಿಗೊಂದು ಮಾನ್ಯತೆಯನ್ನು ತಂದಿತ್ತವು. ಇದು ಪುರೋಹಿತಶಾಹಿ ಪರಂಪರೆಯನ್ನು ಠೀಕಿಸಿತು ಮತ್ತು ಅದಕ್ಕಿದ್ದ ಸರ್ವಮಾನ್ಯತೆಯನ್ನು ಪದಚ್ಯುತಗೊಳಿಸಿತು.

ಕೋಟಿ ಚೆನ್ನಯ ಯಕ್ಷಗಾನದ ಒ೦ದು ದೃಶ್ಯ
ಈ ಬೆಳವಣಿಗೆಗಳು ಯಕ್ಷಗಾನದ ವಸ್ತುವನ್ನೇ ಪಲ್ಲಟಗೊಳಿಸಿತು. ಯಕ್ಷಗಾನ ತುಳು ಪ್ರಸಂಗಗಳ ಚರಿತ್ರೆ 1929ರಷ್ಟು ಹಿಂದೆ ಹೋದರೂ (ಕೃಷ್ಣ ಸಂಧಾನದ ತುಳು ಅನುವಾದ, ಸಂಕಯ್ಯ ಭಾಗವತರು) ಯಕ್ಷಗಾನದಲ್ಲಿ ಬದಲಾವಣೆ ತಂದ ತುಳು ಪ್ರಸಂಗವೆಂದರೆ ಕೋಟಿಚೆನ್ನಯವೇ. 1940ರಲ್ಲಿ ಪಂದಬೆಟ್ಟು ವೆಂಕಟರಾಯರಿಂದ ರಚಿತವಾದ ಈ ಪ್ರಸಂಗವು ಯಕ್ಷಗಾನ ರಂಗಭೂಮಿಗೆ ತುಳುವೀರರನ್ನು ತಂದಿತು ಮತ್ತು ಯಕ್ಷಗಾನ ಪ್ರೇಕ್ಷಕರಿಗೆ ಇನ್ನಿಲ್ಲದ ಹೊಸ ಅನುಭವವನ್ನು ತಂದುಕೊಟ್ಟಿತು. ಮುಖ್ಯವಾಗಿ ಬಿಲ್ಲವ ಹುಡುಗರ ಸಾಹಸ ಪ್ರದರ್ಶನದ ಈ ಕಥೆಯು ಯಕ್ಷಗಾನದ ಶೈಲಿಗೆ ಸರಿಯಾಗಿ ಹೊಂದಿಕೊಂಡಿತು.

ತುಳು ಪಾಡ್ದನದ ಮತ್ತು ತುಳುನಾಡಿನ ಆಚರಣೆಯ ಸಹಾಯದಿಂದ ತುಳು ಮಾತೃ ಭಾಷೆಯಾಗುಳ್ಳ ಕಲಾವಿದರುಗಳು ರಂಗದ ಮೇಲೆ ಹೊಸ ಲೋಕವನ್ನು ಕಟ್ಟಿದರು. ಇಂದಿಗೂ ಈ ಪ್ರಸಂಗವೂ ಜನಪ್ರಿಯವಾಗಿ ಉಳಿದಿರುವುದು ಅದರ ಮಹತ್ವವನ್ನು ಸಾಬೀತುಪಡಿಸುತ್ತದೆ. ಮುಂದೆ ತುಳುನಾಡ ಸಿರಿ, ಭೂತಾಳ ಪಾಂಡ್ಯ, ಅಮರಶಿಲ್ಪಿ ವೀರಕಲ್ಕುಡ, ಪಟ್ಟದ ಪದ್ಮಲೆ, ಸೊರ್ಕುದ ಸಿರಿಗಿಂಡೆ, ಕಾಡಮಲ್ಲಿಗೆ, ಗೆಜ್ಜೆದಪೂಜೆ, ಮೊದಲಾದ ಪ್ರಸಂಗಗಳು ತುಳು ಯಕ್ಷಗಾನವನ್ನು ಖಾಯಂಗೊಳಿಸಿದವು.

ನಮಗೆಲ್ಲ ಈಗಾಗಲೇ ತಿಳಿದಿರುವಂತೆ, ಪಾಡ್ದನಗಳು ತುಳುನಾಡಿನ ಜನ ಸಾಮಾನ್ಯರ ಆತ್ಮಕಥೆಗಳಾಗಿವೆ. ಈ ಕಥೆಗಳು ರಂಗಭೂಮಿಗೆ ಬರುತ್ತಿದ್ದಂತೆ ಜನ ಸಾಮಾನ್ಯರಿಗೆ ರಂಗದ ಮೇಲೆ ತಮ್ಮನ್ನೇ ಕಂಡಂತಾಗಿರಬೇಕು. ತಾವು ನಂಬುವ ದೈವಗಳನ್ನೇ ರಂಗದಲ್ಲಿ ಕಂಡಾಗ ಜನರಿಗೆ ರಂಗಭೂಮಿಯು ತಮ್ಮ ಬದುಕಿನ ವಿಸ್ತರಣೆಯಂತೆ ಕಂಡಿರಬೇಕು. ಶತಮಾನಗಳಿಂದ ಅಭಿವ್ಯಕ್ತಿಗೆ ಅವಕಾಶವಿಲ್ಲದೆ ಸೊರಗಿದ ಸಮುದಾಯಗಳಿಗೆ ತುಳು ರಂಗಭೂಮಿಯು ವಿಸ್ತಾರವಾದ ಒಂದು ವೇದಿಕೆಯನ್ನು ಒದಗಿಸಿತು. ಇದೊಂದು ಮಹಾನ್‌ ಘಟನೆ.

ತುಳು ಯಕ್ಷಗಾನಗಳು ಯಕ್ಷಗಾನ ಲೋಕದಲ್ಲಿ ಭಾರೀ ಬದಲಾವಣೆಗಳನ್ನು ತಂದವು. ವೇಷಭೂಷಣಗಳು ಮತ್ತು ಬಣ್ಣಗಾರಿಕೆ ಸರಳಗೊಂಡವು. ಬಣ್ಣದ ವೇಷಗಳು ಬಹುಮಟ್ಟಿಗೆ ರಂಗದಿಂದಲೇ ಮರೆಯಾದುವು. ಹಾಸ್ಯಗಾರರಿಗೆ ರಂಗದಲ್ಲಿ ವಿಶೇಷ ಸ್ಥಾನ ಪ್ರಾಪ್ತಿಸಿತು. ಎಷ್ಟೋ ಬಾರಿ ಅವರು ರಂಗ ನಿರ್ದೇಶಕರ ಪಾತ್ರವನ್ನು ನಿರ್ವಹಿಸಬೇಕಾಯಿತು. ಪರಂಪರೆಯಲ್ಲಿತ್ತು ಎನ್ನಲಾದ ಒಡ್ಡೋಲಗ ಕುಣಿತಗಳು ಮರೆಗೆ ಸಂದುವು. ಕುಣಿತಗಳಲ್ಲಿ ವಿಶೇಷ ಬದಲಾವಣೆಗಳು ಕಾಣಿಸದಾದರೂ ಅವುಗಳ ವೈವಿಧ್ಯ ಕಡಿಮೆಯಾಯಿತು. ಪೂರ್ವ ರಂಗವೂ ಕಾಣೆಯಾಯಿತು. ಕೇಳಿ ಹೊಡೆತ, ಬಾಲಗೋಪಾಲರ ಕುಣಿತ, ಸ್ತ್ರೀ ವೇಷಗಳು ಮರೆಗೆ ಸಂದುವು. ಹೀಗೆ ಅನೇಕ ಭಾಗಗಳನ್ನು ಕಳಕೊಂಡ ಯಕ್ಷಗಾನವು ತುಳುವಿನ ಮೂಲಕ ಬೇರೆ ಕೆಲವನ್ನು ಪಡೆದುಕೊಂಡಿತು. ತುಳು ಭಾಷೆಯ ಸಮದ್ಧ ಬಳಕೆ, ತುಳು ನಾಡಿನ ಚರಿತ್ರೆಯ ಶೋಧನೆ, ಪಾಡ್ದನಗಳ ಬಳಕೆ, ರಂಗದಲ್ಲಿ ವಾಸ್ತವತೆಯನ್ನು ಮೂಡಿಸಲು ಮಾಡಿದ ಪ್ರಯತ್ನ-ಇತ್ಯಾದಿಗಳು ರಂಗದಲ್ಲಿ ಹೊಸದಾಗಿ ಕಾಣಿಸಿಕೊಂಡವು.

ಆದರೆ ತುಳು ಯಕ್ಷಗಾನದ ಮೇಳದ ಯಜಮಾನರುಗಳು, ಕಲಾವಿದರು ಪರಂಪರೆಯ ಅರಿವಿಲ್ಲದೆ ಮಾಡಿದ ಕೆಲವು ಬದಲಾವಣೆಗೆಳು ನಿಧಾನವಾಗಿ ಮುನ್ನೆಲೆಗೆ ಬಂದಾಗ, ಅನಾಹುತ ಸಂಭವಿಸಿ ಹೋಗಿತ್ತು. ಕಲೆಯ ಮೂಲಕ ಹಣ ಸಂಪಾದಿಸುವುದು ಮಖ್ಯ ಪ್ರಣಾಳಿಕೆಯಾದಾಗ ಕಲೆ ಅವನತಿಯ ಹಾದಿ ಹಿಡಿಯುವುದು ಅನಿವಾರ್ಯವಾಗಿತ್ತು. ಹಣ ಸಂಪಾದನೆಗೋಸ್ಕರ ಎಲ್ಲ ಬಗೆಯ ಪ್ರಯೋಗಗಳನ್ನು ರಂಗಸ್ಥಳದಲ್ಲಿ ಮಾಡಲಾಯಿತು. ಸಿನಿಮೀಯ ಘಟನೆಗಳಿಗೆ ಪ್ರಾಶಸ್ತ್ಯ ನೀಡಲಾಯಿತು. ಒಂದು ಬಗೆಯ ಭ್ರಾಮಕ ಲೋಕದಲ್ಲಿ ಕ್ರಿಯಾಶೀಲವಾಗಿದ್ದ ಯಕ್ಷಗಾನವು ಅತಿಯಾದ ವಾಸ್ತವತಾವಾದದ ಹೊಡೆತಕ್ಕೆ ಗುರಿಯಾಗಿ ನಲುಗಿತು. ಪರಿಣಾಮವಾಗಿ ಅತಿ ಸಣ್ಣಕಾಲದಲ್ಲಿಯೇ ತುಳು ಯಕ್ಷಗಾನಗಳು ತೆರೆಮರೆಗೆ ಸರಿಯತೊಡಗಿದುವು. ನಾವೆಲ್ಲ ಇದರಿಂದ ಕಲಿಯಬಹುದಾದ ಪಾಠ ಬಹಳ ದೊಡ್ಡದು. ಆದರೆ ಕಲಿಯಲು ಜನರೇ ಇಲ್ಲದ ಕಾಲವಿದು.

ಕೃಪೆ : http://vijaykarnataka.indiatimes.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ